ಪುಂಡಲೀಕ 
ಪಾಂಡುರಂಗ ವಿಟ್ಠಲನ ಮಹಾನ್ ಭಕ್ತ. ಈತನ ಜೀವನ ಚರಿತ್ರೆಯ ಬಗೆಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಈತನ ಉಲ್ಲೇಖ ಮೊದಲ ಬಾರಿಗೆ ಕಾಣುವುದು ಪಂಡರಪುರದ ವಿಟ್ಠಲನ ದೇವಾಲಯದಲ್ಲಿರುವ ಹೊಯ್ಸಳ ಸೋಮೇಶ್ವರನ ಶಾಸನದಲ್ಲಿ ಕ್ರಿ. ಶ. (1237). ಈತ ಕನ್ನಡಿಗ ಎಂಬ ವದಂತಿಯೂ ಇದೆ. 

	ಪ್ರಚಲಿತ ಇರುವ ಈತನ ಚರಿತ್ರೆ ಹೀಗಿದೆ ; ಈತ ಭೀಮರಥಿಯ ತೀರದ ಪಂಢರಪುರದಲ್ಲಿದ್ದ ಜಾನುದೇವ ಹಾಗೂ ಸತ್ಯಾ ಎಂಬುವವರ ಮಗ. ಮದುವೆಯಾದ ಮೇಲೆ ಹೆಂಡತಿಯ ವ್ಯಾಮೋಹಕ್ಕೆ ಬಿದ್ದು ತಂದೆ ತಾಯಿಯರನ್ನು ತುಚ್ಛವಾಗಿ ಕಾಣತೊಡಗಿದ. ನೊಂದ ಅವರು ಕಾಶಿ ಯಾತ್ರೆಗೆ ಹೋದರು. ಕಾಲಾಂತರದಲ್ಲಿ ಪುಂಡಲೀಕನೂ ಕಾಶೀಯಾತ್ರೆಗೆ ಹೊರಟು ದಾರಿಯಲ್ಲಿ ಕುಕ್ಕುಟ ಋಷಿಗಳ ಆಶ್ರಮದಲ್ಲಿ ತಂಗಿದ. ಮಾತಾಪಿತೃಗಳ ಸೇವೆಯನ್ನು ಆ ಋಷಿಗಳು ತಮ್ಮ ಇಚ್ಛೆಗನುಸಾರ ಮಾಡುತ್ತಿದ್ದುದನ್ನು ಕಂಡನಲ್ಲದೆ, ಗಂಗಾ ಯಮುನಾ ಸರಸ್ವತೀ ನದಿಗಳ ದೇವತೆಯರು ಬಂದು ಆ ಋಷಿಗೆ ಸ್ನಾನ ಮಾಡಿಸುವುದನ್ನೂ ವೀಕ್ಷಿಸಿ ಆಶ್ಚರ್ಯಪಟ್ಟು ಆ ಬಗ್ಗೆ ಋಷಿಯನ್ನು ಕೇಳಲಾಗಿ ಆತ ಮಾತಾಪಿತೃಗಳ ಸೇವೆಯಿಂದ ಆ ಸೌಭಾಗ್ಯವುಂಟಾಗಿದೆಯೆಂದು ತಿಳಿಸಿ ಪುತ್ರಧರ್ಮವನ್ನು ಉಪದೇಶಿಸಿದ. ಆಗ ಪುಂಡಲೀಕ ತನ್ನ ವರ್ತನೆಗೆ ಜಿಗುಪ್ಸೆಗೊಂಡು ಮುಂದೆ ಹೋಗಿ ತಂದೆ ತಾಯಿಯರನ್ನು ಭೇಟಿಯಾಗಿ ಕಾಶಿ ಯಾತ್ರೆಯನ್ನು ಸಾಂಗಗೊಳಿಸಿ ಅವರನ್ನು ಹಿಂದಕ್ಕೆ ಕರೆತಂದು ಅಲ್ಲಿಂದ ಮುಂದೆ ಅವರ ಸೇವೆಯನ್ನು ವ್ರತದಂತೆ ನಿಷ್ಠೆಯಿಂದ ಮಾಡಿದ. ಈತನ ಆ ಸೇವೆಗೆ ಮೆಚ್ಚಿ ವಿಷ್ಣು ಪ್ರತ್ಯಕ್ಷನಾಗಲು ತಾಯಿ ತಂದೆಯರ ಸೇವೆಗೆ ಅಡಚಣೆಯಾಗದಿರಲೆಂದು ಪುಂಡಲೀಕ ವಿಷ್ಣುವಿಗೆ ನಿಲ್ಲಲು ಇಟ್ಟಿಗೆಯೊಂದನ್ನು ಎಸೆದ. ಆ ಇಟ್ಟಿಗೆಯ ಮೇಲೆ ನಿಂತ ಪರಮಾತ್ಮ, ಪುಂಡಲೀಕನ ಸೇವೆಗೆ ಮೆಚ್ಚಿ ವರವನ್ನು ಕೊಡುತ್ತೇನೆ ಕೇಳಿಕೊ ಎನ್ನಲು ಪುಂಡಲೀಕಸ್ವಾಮಿ ಈಗ ಯಾವ ರೂಪದಲ್ಲಿ ನನ್ನ ಮುಂದೆ ನಿಂತಿರುವೆಯೋ ಹಾಗೆಯೇ ನಿರಂತರ ಇಲ್ಲಿ ನನ್ನ ಸನಿಹದಲ್ಲೇ ನಿಲ್ಲು ಎಂದು ಬೇಡಿಕೊಂಡ. ಮಿಟದ (ಇಟ್ಟಿಗೆ) ಮೇಲೆ ನಿಂದ ವಿಷ್ಣು (ವಿಟ್ಠಲ) ಪುಂಡಲೀಕನಿಗೆ ಆ ವರವನ್ನು ದಯಪಾಲಿಸಿ ಪುಂಡಲೀಕವರದ ವಿಟ್ಠಲನಾದ. ಅಂದಿನಿಂದ ಆ ಊರು ಪುಂಡಲೀಕಪುರವೆನಿಸಿತು.

	ಭೀಮರಥಿಯ ತೀರದಲ್ಲಿ ವಿಠೋಬನ ಮಂದಿರದಿಂದ ಸುಮಾರು 1,500' ಅಂತರದಲ್ಲಿ ಪುಂಡಲೀಕನ ದೇವಸ್ಥಾನವಿದೆ. ಇದರಲ್ಲಿ ಶಿವಲಿಂಗವಿದೆ. ಕೆಲವರ ಪ್ರಕಾರ ಈ ದೇವಸ್ಥಾನ ಪುಂಡಲೀಕನ ಸಮಾಧಿ. ಇದನ್ನು ಚಾಂಗದೇವ ಕಟ್ಟಿಸಿದನೆಂದು ಹೇಳಲಾಗುತ್ತದೆ. ಕ್ರಿ.ಶ. 1750 ರಲ್ಲಿ ಹೋಳ್ಕರ್ ಮನೆತನದ ರಾಜರು ಈ ದೇವಸ್ಥಾನದ ಜೀಣೋದ್ಧಾರ ಮಾಡಿದುದಾಗಿ ತಿಳಿದು ಬರುತ್ತದೆ. ಜ್ಞಾನದೇವನಿಂದ ಸ್ಥಾಪಿತವಾದ ಸಂಪ್ರದಾಯದ ಮೇಲೆ ಪುಂಡಲೀಕನ ಪ್ರಭಾವವಿರುವುದಾಗಿ ವಿದ್ವಾಂಸರ ಮತ. ಪುಂಡಲೀಕವರದ ಹರೇ ವಿಟ್ಠಲ ಎಂಬ ಮಾತು ಜನಜನಿತವಾಗಿ ಅದರಲ್ಲೂ ವೈಷ್ಣವ ಸಂಪ್ರದಾಯದ ಮನೆತನಗಳಲ್ಲಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಇಂದಿಗೂ ಉಳಿದುಬಂದಿದೆ.					(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ